ಮಿಲಾನ್
ಉತ್ತರ ಇಟಲಿಯ ಲೊಂಬಾರ್ಡಿ ಪ್ರಾಂತದ ರಾಜಧಾನಿ. ಇಟಲಿಯ ಐತಿಹಾಸಿಕ ಬೃಹತ್ ನಗರಗಳ ಪೈಕಿ ಎರಡನೆಯದು ಮತ್ತು ಆರ್ಥಿಕೋದ್ಯಮ ಕೇಂದ್ರ. ಸ್ಥಳೀಯವಾಗಿ ಮಿಲಾನೊ ಎಂದು ಕರೆಯುತ್ತಾರೆ. ಅಡ್ಡಾ ಮತ್ತು ಟೆಸಿನೊ ನದಿಗಳ ನಡುವಿನ ಪೋ ಬಯಲಿನ ಮಧ್ಯದಲ್ಲಿ ಉ.ಅ. 45(28'-ಪೂ.ರೆ. 9(12' ನಲ್ಲಿದೆ. ವಿಸ್ತೀರ್ಣ 182 ಚಕಿಮೀ. ಜನಸಂಖ್ಯೆ 1,561,438(1983).

	ಮಿಲಾನ್ ಪ್ರಪಂಚದ ಪ್ರಾಚೀನ ನಗರಗಳಲ್ಲೊಂದು. ಇಟಲಿ ಮತ್ತು ಯೂರೋಪಿನ ದೇಶಗಳ ಮಧ್ಯಮಮಾರ್ಗದಲ್ಲಿರುವ ಈ ನಗರ ಒಂದನೆಯ ಶತಮಾನಕ್ಕೂ ಹಿಂದೆಯೇ ಮುಖ್ಯ ವ್ಯಾಪಾರ ಕೇಂದ್ರವಾಗಿತ್ತು. ಈ ನಗರ ಆಧುನಿಕವಾಗಿ ಈಗ ಬೆಳೆದಿದೆ ಹಾಗೂ ಅನೇಕ ಪ್ರಾಚೀನ ಸುಂದರ ಕಟ್ಟಡಗಳನ್ನು ಒಳಗೊಂಡಿದೆ. ಇಲ್ಲಿಯ ಗಾಥಿಕ್ ಕಥೀಡ್ರಲ್ ಮಧ್ಯಯುಗದ ಯುರೋಪಿನ ಮೂರನೆಯ ಬೃಹತ್ ಚರ್ಚು, ಒಂದನೆಯ ನೆಪೋಲಿಯನ್ನನ ಆಜ್ಞೆಯಂತೆ 1805-13ರ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಲಾಯಿತು. ಇದು 149 ಮೀಟರ್ ಉದ್ದ ಮತ್ತು 55 ಮೀಟರ್ ಅಗಲವಿದೆ. ಇದರ ಗೋಪುರ 108 ಮೀಟರ್ ಎತ್ತರವಿದೆ. ಇದರಲ್ಲಿ 3,000 ವಿಗ್ರಹಗಳೂ 52 ಕಂಬಗಳೂ ಇವೆ.

	ಬ್ರೆರಾ ಪ್ಯಾಲೇಸ್ (1615) ಹಳೆಯ ದೊಡ್ಡ ಗ್ರಂಥಾಲಯ. 18ನೆಯ ಶತಮಾನದಲ್ಲಿ ನಿರ್ಮಾಣವಾದ ಲಾಸ್ಕಾಲ ಯೂರೋಪಿನ ಪ್ರಸಿದ್ಧ ಕಲಾಮಂದಿರ. ಪ್ರಪಂಚಾದ್ಯಂತ ಬರುವ ಪ್ರವಾಸಿಗಳು ಇಲ್ಲಿ ಸಂಗೀತ ಕಚೇರಿಗಳಿಗೆ ಭೇಟಿ ನೀಡುತ್ತಾರೆ. ಇಲ್ಲಿಯ ಅಂಬ್ರೊಸಿಯನ್ ಗ್ರಂಥಾಲಯದಲ್ಲಿ ಪ್ರಾಚೀನ ಹಸ್ತಪ್ರತಿಗಳು ಮತ್ತು ವಿರಳಗ್ರಂಥಗಳು ಇವೆ. ಬ್ರೆರಾ ವಸ್ತುಸಂಗ್ರಹಾಲಯದಲ್ಲಿ ಇಟಲಿಯ ಚಿತ್ರಕಲೆಯ ಉತ್ತಮ ಮಾದರಿಗಳನ್ನು ಇಡಲಾಗಿದೆ. ಪೆಲ್ಡಿ ಪೋಜೋಲಿ ವಸ್ತು ಸಂಗ್ರಹಾಲಯದಲ್ಲಿ ಆಧುನಿಕ ಕಲಾ ಸಂಗ್ರಹವಿದೆ. ಇಲ್ಲಿಯ ಸ್ಮೊರ್ಜ ಕ್ಯಾಸಲ್ ಮಿಲಾನಿನ ದೊರೆಗಳ ಅರಮನೆಯಾಗಿತ್ತು. ಸಂತಮೇರಿ ಚರ್ಚ್‍ನಲ್ಲಿ ಗೋಡೆಯ ಮೇಲೆ ಲಿಯೊನಾರ್ಡೊ ಡ ವಿಂಚಿ  ಚಿತ್ರಿಸಿದ ಲಾಸ್ಟ್ ಸಪ್ಪರ್ ಎಂಬ ಇತಿಹಾಸ ಪ್ರಸಿದ್ಧ ಚಿತ್ರವಿದೆ. ರಾಜ್ಯಪತ್ರಾಗಾರ ಮಿಲಾನಿನಲ್ಲಿದೆ.

	ಇಟಲಿಯ ಏಕೀಕರಣದ ತರುವಾಯ ಮಿಲಾನ್ ಕೈಗಾರಿಕಾ ನಗರವಾಗಿ ಬೆಳೆಯಿತು. ಇಟಲಿಯಾದ್ಯಂತ ಇರುವ ಅನೇಕ ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳಿಗೆ ಇದು ಕೇಂದ್ರವಾಯಿತು. ಇಲ್ಲಿ ರಾಸಾಯನಿಕ ವಸ್ತುಗಳು, ವಿದ್ಯುತ್ ಉಪಕರಣಗಳು, ಕೃತಕ ಮತ್ತು ಹತ್ತಿಬಟ್ಟೆಗಳು, ಬಣ್ಣ, ಸೋಪುಸಾಗಣೆ ಸಲಕರಣೆ ಇತ್ಯಾದಿಗಳ ಉತ್ಪಾದನೆಯಿದೆ. ಕ್ರೀಡಾ ಕೇಂದ್ರ ಮತ್ತು ಪುಟ್‍ಬಾಲ್ ಕ್ರೀಡಾಂಗಣವಿದೆ. ರಾಷ್ಟ್ರದ ಮುಖ್ಯ ಹೆದ್ದಾರಿಗಳೂ ಇಟಲಿಯ 26 ರೈಲು ಮಾರ್ಗಗಳು ಕೂಡುವ ಮುಖ್ಯ ನಿಲ್ದಾಣವೂ ಬೃಹತ್ ವಿಮಾನ ನಿಲ್ದಾಣವೂ ಮಿಲಾನ್‍ನಲ್ಲಿವೆ.

	ಮಿಲಾನಿಯನ್ನರು ಮಹತ್ತ್ವಾಕಾಂಕ್ಷಿಗಳೆಂದೂ ವ್ಯಾಪಾರ ವ್ಯವಹಾರದಲ್ಲಿ ಚತುರರೆಂದೂ ಪ್ರಸಿದ್ಧರಾಗಿದ್ದಾರೆ. ಹೆಚ್ಚುಮಂದಿ ರೋಮನ್ ಕ್ಯಾಥೋಲಿಕ್ ಪಂಥದವರು. ಇಲ್ಲಿಯ ಜನ ರಸಿಕನೂ ಕಲಾರಾಧಕರೂ ನಾಟಕಪ್ರಿಯರೂ ಆಗಿದ್ದಾರೆ.

	ಕ್ರಿ.ಪೂ. 4ನೆಯ ಶತಮಾನದಲ್ಲಿ ಕೆಲ್ಟರು ಇಲ್ಲೊಂದು ಪಟ್ಟಣ ಸ್ಥಾಪಿಸಿದರು. ಕ್ರಿ. ಪೂ. 222ರಲ್ಲಿ ರೋಮನ್ನರು ಇದನ್ನು ವಶಪಡಿಸಿಕೊಂಡು ಮೆಡಿಯೊಲಾನಮ್ ಎಂದು ಕರೆದರು. ಇದೇ ಮುಂದೆ ಮಿಲಾನೊ ಅಥವಾ ಮಿಲಾನ್ ಎಂದು ಪ್ರಸಿದ್ಧವಾಯಿತು. 13ರಿಂದ 15ನೆಯ ಶತಮಾನದ ಅವಧಿಯಲ್ಲಿ ಇಲ್ಲಿಗೆ ಅನೇಕ ಕಲಾವಿದರು ಬಂದು ನೆಲಸಿದರು. ಅವರಿಗೆ ಈ ನಗರದ ಶ್ರೀಮಂತರ ಉದಾರ ಪ್ರೋತ್ಸಾಹ ಸಿಕ್ಕಿತು. ಉತ್ಕøಷ್ಟ ಕಲಾಕೃತಿಗಳ ಮತ್ತು ಶಿಲ್ಪಗಳ ರಚನೆಯಾಯಿತು. ಮುಂದೆ ಈ ನಗರ ಸ್ಪೇನ್ (1535). ಆಸ್ಟ್ರಿಯ (1714) ಮತ್ತು ಫ್ರಾನ್ಸ್‍ಗಳ (1797) ವಶವಾಗಿತ್ತು. 1859ರಲ್ಲಿ ಮಿಲಾನ್ ಹೊಸದಾಗಿ ಸ್ಥಾಪಿಸಲಾದ ಏಕೀಕೃತ ಇಟಲಿಯ ಭಾಗವಾಗಿ ಪ್ರಮುಖ ಕೈಗಾರಿಕಾ ನಗರವಾಗಿ ಬೆಳೆಯಿತು. ಇಟಲಿಯ ಸರ್ವಾಧಿಕಾರಿಯಾಗಿದ್ದ ಮುಸೋಲಿನಿ ತನ್ನ ಫ್ಯಾಸಿಸ್ಟ್ ಚಳವಳಿಯನ್ನು ಮೊದಲಿಗೆ ಮಿಲಾನ್‍ನಲ್ಲಿ ಸ್ಥಾಪಿಸಿದ. ಎರಡನೆಯ ಮಹಾಯುದ್ಧದ ಅನಂತರ ಮಿಲಾನ್ ನಗರ ತ್ವರಿತವಾಗಿ ಬೆಳೆಯಿತು.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ